Thursday, April 10, 2008

ಟೂಸ್ ಸ್ ಸ್ ಸ್ ಸ್ ಸ್ ಸ್...ಟೈರ್ ಪಂಚರ್

ವಾಹನ ಇದ್ದ ಮೇಲೆ ಟೈರ್ ಪಂಚರ್ ಆಗೋದು ಸರ್ವೇ ಸಾಮಾನ್ಯ. ಆದರೆ ಬೇಕೆಂದಲೇ ಟೈರ್ ಪಂಚರ್ ಮಾಡಿದರೆ?
ಟೈರ್ ಪಂಚರ್ ಆದಾಗಲೆಲ್ಲ ನೆನಪಿಗೆ ಬರೋದು ನನ್ನ ಬಾಲ್ಯದ ಆಟ. ನನಗೆ 6 ವರ್ಷ ಇರಬಹುದು. ನಮ್ಮ ಪಕ್ಕದ ಮನೆಯವರು ಟ್ರಾವೆಲ್ಸ್ ನಡೆಸುತ್ತಿದ್ದರು. ಯಾವಾಗಲು ರಸ್ತೆಯ ಕೊನೆಯಲ್ಲಿ ಟ್ರಾವೆಲ್ಸಿನ ಕಾರ್, ವ್ಯಾನ್ ಗಳು ನಿಂತಿರುತ್ತಿದ್ದವು. ಒಮ್ಮೆ ನನ್ನ ಅಣ್ಣ ವ್ಯಾನ್ ಟೈರ್ ಬಳಿ ಕುಳಿತು ಏನೋ ಮಾಡುತ್ತಿದ್ದ. ಅದನ್ನು ಗಮನಿಸಿದ ನಾನು ಅವನು ಅಲ್ಲಿಂದ ಹೋದ ಮೇಲೆ ಅವನು ಮಾಡಿದ ಹಾಗೆ ಒಂದು ಚಿಕ್ಕ ಕಡ್ಡಿಯನ್ನು ತೆಗೆದುಕೊಂಡು ಟೈರ್ ನಿಂದ ಬ್ಲೋ ತೆಗೆಯ ತೊಡಗಿದೆ. ಆಗ ಟುಸ್ ಸ್ ಸ್ ಎಂದು ಸದ್ದು ಬಂದಿತು. ಮೊದಲಿಗೆ ಭಯವಾಹಿತು, ಆದರೆ ಸ್ವಲ್ಪ ಸಮಯದ ನಂತರ ಈ ಆಟ ಚೆನ್ನಾಗಿದೆ ಎನ್ನಿಸಿತು. ಅಂದಿನಿಂದ ಟೈರ್ ನಿಂದ ಬ್ಲೋ ತೆಗೆಯೋದು ನನ್ನ ಆಟವಾಹಿತು. ಬ್ಲೋ ತೆಗೆದ ಮೇಲೆ ಟೈರ್ ಪಂಚರ್ ಹಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ, ಅದರ ಅರಿವು ಸಹ ನನಗೆ ಇರಲಿಲ್ಲ, ಆದರೆ ಹಾಗೆ ಮಾಡುವುದು ನನಗೆ ಬಹಳವಾಗಿ ಇಷ್ಟವಾಗಿತ್ತು.
ಆದರೆ ಈ ನನ್ನ ಆಟ ಬಹಳ ದಿನ ನಡೆಯಲಿಲ್ಲ. ಒಂದು ದಿನ ಮಧ್ಯಾನ ಶಾಲೆ ಮುಗಿಸಿ ಬಂದ ಮೇಲೆ ರಸ್ತೆಯ ಕೊನೆಯಲ್ಲಿ ನಿಂತಿದ್ದ ವ್ಯಾನ್ ಬ್ಲೋ ತೆಗೆಯಲು ಹೋದೆ. ನನ್ನ ದುರಾದೃಷ್ಟವೋ ಏನೊ ವ್ಯಾನ್ ಒಳಗೆ ಮಲಗಿದ್ದ ಡ್ರೈವರ್ ನಾನು ಗಾಡಿಯಿಂದ ಬ್ಲೋ ತೆಗೆಯೋದನ್ನ ನೋಡಿಬಿಟ್ಟ. ನನ್ನನ್ನು ಗದರಿಸಿ, ಅಲ್ಲಿಂದ ನನ್ನ ಅಮ್ಮನ ಬಳಿ ಕರೆದು ಕೊಂಡು ಬಂದು ನನ್ನ ಬಗ್ಗೆ ಛಾಡಿ ಹೇಳತೊಡಗಿದನು. ಅಮ್ಮ ಟೈರ್ ಯಾಕೆ ಪಂಚರ್ ಮಾಡ್ತಿದ್ದೆ ಅಂತ ನನ್ನನ್ನು ಕೇಳಿದರು. ಹಾಗೆಂದರೇನು ಎಂದು ತಿಳಿಯದ ನಾನು ಏನು ಹೇಳದೆ ಸುಮ್ಮನೆ ನಿಂತಿದ್ದೆ. ಆ ಡ್ರೈವರ್ ಮೇಲೆ ಬಹಳ ಕೋಪ ಬರುತ್ತಿತ್ತು. ನಾನು ಆಟವಾಡಿಕೊಂಡಿದ್ದರೇ ಇವನಿಗೇನು ಪ್ರಾಬ್ಲಮ್ ಎಂದು ಮನಸ್ಸಿನಲ್ಲೆ ಗೊಣಗತೊಡಗಿದೆನು. ಅಂದಿನಿಂದ ಯಾರು ಇಲ್ಲದ ಸಮಯದಲ್ಲಿ ಹೋಗಿ ಟೈರ್ ಬ್ಲೋ ತೆಗೆದು ಬಂದುಬಿಡುತ್ತಿದ್ದೆ. ಆ ಟೂಸ್ ಸ್ ಸ್ ಸದ್ದು ಕೇಳಲು ನನಗೆ ಬಹಳ ಇಷ್ಟ. ಈ ನನ್ನ ಆಟ ಆಗಾಗ ನಡೆಯುತ್ತಲ್ಲೇ ಇರುತ್ತಿತ್ತು. ಕಾಲ ಕಳೆದಂತೆ ಟೈರ್ ಬ್ಲೋ ತೆಗೆದರೆ ಏನಾಗುವುದು, ಟೈರ್ ಪಂಚರ್ ಅಂದರೇನು, ಪಂಚರ್ ಆದರೆ ಏನಾಗುವುದು ಎಂದು ತಿಳಿದೆ. ತಿಳಿದ ಮೇಲೆ ಈ ನನ್ನ ಆಟ ಕೊನೆ ಕಂಡಿತು.
ಈಗಲೂ ಕೆಲವೊಮ್ಮೆ ಟೈರ್ ಪಂಚರ್ ಮಾಡಲೇ ಎಂದುಕೊಳ್ಳುತ್ತೇನೆ, ಆದರೆ ಮಾಡಿದ ಮೇಲೆ ಆಗುವ ತೊಂದರೆ ನೆನೆದು ಸುಮ್ಮನಾಗುತ್ತೇನೆ. ಬಾಲ್ಯದ ಸವಿ ನೆನಪುಗಳನ್ನು ನೆನೆದು ಸಂತೋಷಿಸುತ್ತೇನೆ.